ಏಗ್ನಾತ: ಆದಿಕಶೇರುಕಗಳ ಗುಂಪು. ಈ ಗುಂಪಿನ ಪ್ರಾಣಿಗಳು ಮೀನಿನಂತೆ ಕಂಡರೂ, ಇವಕ್ಕೆ ದವಡೆಗಳಿಲ್ಲ. ಈ ಮುಖ್ಯ ಲಕ್ಷಣದಿಂದ ಇವನ್ನು ಮೀನು ಮತ್ತು ನೆಲವಾಸಿ ಕಶೇರುಕಗಳಿಂದ ಪ್ರತ್ಯೇಕಿಸಬಹುದು. ದವಡೆಗಳಿಲ್ಲದಿರುವುದರಿಂದ ಇವನ್ನು ಸಾಮಾನ್ಯವಾಗಿ ದವಡೆರಹಿತ ಕಶೇರುಕಗಳು ಎಂದು ಕರೆಯುತ್ತಾರೆ. ಇವು ಜಲವಾಸಿಗಳು. ಆರ್ಡೊವಿಶಿಯನ್ ಕಾಲದಲ್ಲಿ ಕೆಲವೇ ಸಂಖ್ಯೆಯಲ್ಲಿದ್ದವು. ಈ ಪ್ರಾಣಿಗಳಿಗೆ ಶಿರದ ತಳಭಾಗದಲ್ಲಿ ಚಕ್ರಾಕಾರದ ಹೀರುವ ಬಾಯಿ, ಕಿವಿರುಗಳು ಮತ್ತು ಕಿವಿರುರಂಧ್ರಗಳು, ತಲೆಯ ಮೇಲಿರುವ ಒಂದೇ ಒಂದು ಮಧ್ಯದ ಮೂಗುಹೊಳ್ಳೆ, ಅದರ ಹಿಂದಿರುವ ಪೈನಿಯಲ್ ಕಣ್ಣು, ಮಿದುಳುಕೋಶ, ದೇಹಕ್ಕೆ ಆಧಾರವಾಗಿರುವ ಆದ್ಯಮೃದ್ವಸ್ಥಿಪಟ್ಟೆ (ನೋಟೊಕಾರ್ಡ್), ಒಳ ಕಿವಿಯಲ್ಲಿ ಒಂದು ಅಥವಾ ಎರಡು ಅರ್ಧಚಂದ್ರಾಕಾರದ ನಾಳಗಳು ಇವೆ. ಜೋಡಿ ಈಜು ರೆಕ್ಕೆಗಳಿಲ್ಲ್ಲ.

ಈ ಗುಂಪಿನ ಪ್ರತಿನಿಧಿಗಳು ಸೈಲೂರಿಯನ್ ಕಾಲದಲ್ಲಿ, ಸಿಹಿನೀರಿನ ತಳಭಾಗದಲ್ಲಿ ಜೀವಿಸುತ್ತಿದ್ದುವು. ಡಿವೋನಿಯನ್ ಕಾಲದಲ್ಲಿ ಬಹಳ ಅಭಿವೃದ್ಧಿಯಾಗಿ ಅನೇಕ ಗುಂಪುಗಳಾಗಿ ಬೆಳೆದುವು. ಆದರೆ ಡಿವೋನಿಯನ್ ಕಾಲದ ಅಂತ್ಯದಲ್ಲಿ ಈ ಗುಂಪಿನ ಎಲ್ಲ ಮೀನುಗಳೂ ಅಳಿದು ಹೋಗಿ ಒಂದು ವರ್ಗದವು ಮಾತ್ರ ಉಳಿದವು. ಇವೇ ಈಗ ಬದುಕುಳಿದಿರುವ ದುಂಡು ಬಾಯಿ ಮೀನುಗಳು (ಸೈಕ್ಲೋಸ್ಟೋಮ್ ಮೀನುಗಳು).  

ದವಡೆರಹಿತ ಮೀನುಗಳನ್ನು ಎರಡು ವರ್ಗಗಳನ್ನಾಗಿ ವಿಂಗಡಿಸಿದೆ : 1 ಆಸ್ಟ್ರಕೊಡರ್ಮ್, 2 ಸೈಕ್ಲೊಸ್ಟೊಮೇಟ.

 ಆಸ್ಟ್ರಕೊಡರ್ಮ್ ಮೀನುಗಳು  
ಈಗ ಜೀವಿಸಿರುವ ದುಂಡುಬಾಯಿ ಮೀನುಗಳನ್ನು ಕೆಲವು ಮುಖ್ಯ ಲಕ್ಷಣಗಳಲ್ಲಿ ಹೋಲುತ್ತವಾದರೂ ಕೆಲವು ಲಕ್ಷಣಗಳಲ್ಲಿ ಅವಕ್ಕಿಂತ ಬೇರೆಯಾಗಿವೆ. ಆಸ್ಟ್ರಕೊಡರ್ಮಿಗಳಿಗೆ ಮೂಳೆಯ ರಕ್ಷಾಕವಚವಿತ್ತು. ಕೆಲವಲ್ಲಿ ಹೊರಗೂ ಒಳಗೂ ಮೂಳೆ ದೇಹಕ್ಕೆ ಆಧಾರವಾಗಿತ್ತೆಂದು ಪಳಿಯುಳಿಕೆಗಳಿಂದ ತಿಳಿದುಬಂದಿದೆ. ಆದ್ದರಿಂದ ಇವನ್ನು ಅಸ್ಥಿಕವಚದ ಮೀನುಗಳೆನ್ನಲಾಗಿದೆ. ಈಗ ಈ ಮೀನುಗಳ ಪ್ರತಿನಿಧಿಗಳಾವುವೂ ಇಲ್ಲ (ನೋಡಿ- ಅಸ್ಥಿಕವಚದ-ಮೀನುಗಳು).

 ಸೈಕ್ಲೊಸ್ಟೋಮ್ಮೀನುಗಳು 
ದೇಹ ಸಂಪುರ್ಣವಾಗಿ ಮೃದ್ವಸ್ಥಿಯಿಂದ ಆಧಾರಿತವಾಗಿ ಹಾವಿನಂತೆ ನೀಳವಾಗಿದೆ. ಹೀರುವ ಬಾಯಿ ದುಂಡಗಿದ್ದು ಮುಳ್ಳುಗಳಿಂದ ಕೂಡಿದೆ. ಅರದಂಥ ನಾಲಗೆ ಇದೆ. ಕಿವಿರುಗಳು ಸಣ್ಣ ಚೀಲದಂತಿವೆ. ನಾಸಿಕದ್ವಾರ ನೆತ್ತಿಯ ಮೇಲಿದೆ. ಒಳಕಿವಿಯಲ್ಲಿ ಎರಡು ಅರ್ಧಚಂದ್ರಾಕಾರದ ಎರಡು ನಾಳಗಳಿವೆ. ಇವು ಪರತಂತ್ರ ಜೀವನವನ್ನು ನಡೆಸುತ್ತವೆ. ಹೀರುವ ಬಾಯಿಗಳಿರುವುದರಿಂದ ಬೇರೆ ಮೀನುಗಳಿಗೆ ಅಂಟಿಕೊಂಡು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುತ್ತವೆ. ಇವುಗಳಲ್ಲಿ ಎರಡು ವಿಧ : 1 ಲ್ಯಾಂಪ್ರೆ  ಮೀನು, 2 ಮಿಕ್ಸಿನ್ ಮೀನು. 
 1. ಲ್ಯಾಂಪ್ರೆ ಮೀನು: ಈ ಮೀನುಗಳ ಚರ್ಮ ನುಣುಪು. ಏಳು ಜೊತೆ ಕಿವಿರುಗಳಿವೆ. ಪರಾವಲಂಬಿಗಳಾದರೂ ಬೇರೆ ಮೀನುಗಳಿಗೆ ಅಷ್ಟು ಹಾನಿಕಾರಕವಲ್ಲ.
 2. ಮಿಕ್ಸಿನ್ ಮೀನು: ಮಿಕ್ಸಿನ್ ಮೀನುಗಳ ಚರ್ಮ ಸುಕ್ಕುಸುಕ್ಕಾಗಿರುವುದರಿಂದ ಅವುಗಳಿಗೆ ಸುಕ್ಕು ಮೀನುಗಳು ಎಂದೂ ಹೆಚ್ಚಾಗಿ ಒಂದು ತರಹ ಲೋಳೆಯನ್ನು ವಿಸರ್ಜಿಸುವುದರಿಂದ ಲೋಳೆ ಮೀನುಗಳು ಎಂದೂ ಹೆಸರಿದೆ. ಇವುಗಳಲ್ಲಿ ಕಿವಿರುಗಳು 6-14 ಜೊತೆ. ಬೇರೆ ಮೀನಿಗೆ ಅಂಟಿಕೊಳ್ಳುವುದೊಂದೇ ಅಲ್ಲದೆ ಅದರ ಚರ್ಮವನ್ನು ಗಾಯಗೊಳಿಸಿ ಕ್ರಮೇಣ ಅದರ ದೇಹದೊಳಕ್ಕೆ ಪ್ರವೇಶಿಸಿ ಒಳಗಿನ ಅಂಗಾಂಗಗಳನ್ನು ತಿಂದು ಆತಿಥೇಯ ಪ್ರಾಣಿಯನ್ನು ಪುರ್ಣ ನಾಶಗೊಳಿಸುತ್ತವೆ.	(ಎನ್.ವಿ.ಎ)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ